ನೀನು ಏನಾಗಬೇಕು?
ಧುತ್ತನೆ ಎದುರಾದಾಗ ಈ ದೊಡ್ಡ ಪ್ರಶ್ನೆ
ನಾನಿನ್ನೂ ಸಣ್ಣವ !
ಸಂತೆಬೀದಿಯ ಬ್ರಾಹ್ಮಣರ ಬೇಕರಿಯ,
“ನೊಣ”ವಾಗಬೇಕುಎಂದಿದ್ದೆ
ಅಪ್ಪ ಮನಸಾರೆ ನಕ್ಕಿದ್ದರು !
ಆವತ್ತಿಗೆ ,
ಆವತ್ತಿಗೆ ,
ತುಪ್ಪದ ಮೈಸೂರುಪಾಕಿನ ಮೇಲೆ ಕುಳಿತ
ನೊಣದ ಭಾಗ್ಯದ ಮುಂದೆ
ಮಿಕ್ಕಿದ್ದೆಲ್ಲ ಗೌಣ !!
ಕಾಲಾಂತರದಲ್ಲಿ ಮತ್ತೆ ಎದುರಾದದ್ದು
ಪ್ರೈಮರಿ ಶಾಲೆಯ ಮೇಷ್ಟ್ರಿಂದ,
ತಣ್ಣಗೆ ಹಾಡುತ್ತಿದ್ದ ಪ್ರಮಿಳ
‘ಸಿಂಗರ್’ಆಗ್ತೀನಿ ಎಂದಿದ್ದಳು ನುಲಿಯುತ್ತ
ಸಣಕಲ ಪುಟ್ಸಾಮಿ ಸೆಟೆದು ನಿಂತು
‘ಪೋಲಿಸ್’ ಎಂದ
ಪರೀಕ್ಷೆಗಳಲ್ಲಿ ಸೊನ್ನೆ ಸುತ್ತುತ್ತಿದ್ದ ಸೀನ
‘ನಾನು ಮೇಟ್ರು ಆಯ್ತೀನಿ 'ಎಂದು ಬೀಗಿದ್ದ
ಇನ್ನು ನಾನು ..ಡಿಸಿ ಎಂದಿದ್ದೆ.
ಮಿಕ್ಕವರದ್ದು ..ಹೆಚ್ಚುಕಡಿಮೆ ಅದೇ ಪುನಾರವರ್ತನೆ
ಆದರೆ ಕಡ್ಡಿಶಂಕರ,
‘ನಾನು ಗಾಯಿತ್ರಿ ಗಂಡ ಆಯ್ತ್ಹೀನಿ ಸಾ..’
ಅವನ ದಿಟ್ಟ ಉತ್ತರಕ್ಕೆ ಕೆರಳಿದ ಮೇಷ್ಟ್ರು ..
ಕರುಣಿಸಿದ್ದು ..
ದಿನವಿಡೀ ಕುಕ್ಕರುಗಾಲಿನ ಶಿಕ್ಷೆ .
ಮುದುಡಿಕುಳಿತಿದ್ದ ಗಾಯಿತ್ರಿ ಕಣ್ಣಲ್ಲಿ
ಧಾರಾಕಾರ ತುಂಗಭಧ್ರೆ !
ಆದ ಅವಮಾನಕ್ಕೋ ..ಶಂಕರನ ಮೇಲಿನ ಕರುಣೆಗೋ
ಅದು ಇವತ್ತಿಗೂ ಮಿಲಿಯನ್ ಡಾಲರ್ ಪ್ರಶ್ನೆ !!
ಹದಿನಾರಕ್ಕೆ ಮದುವೆಯಾಗಿ
ಇಪ್ಪತ್ತಕ್ಕೆ ವೈದವ್ಯ ಪ್ರಾಪ್ತವಾದ
ಪ್ರಮೀಳ ಕೊರಳಲ್ಲಿ
ಹಾಡು ಬತ್ತಿ ಯಾವ ಕಾಲವಾಯಿತೋ ?
ಪೋಲಿಸ್ ಗತ್ತಿನ ಪುಟ್ಸಾಮಿಯದು
ಈಗ ಆರ್ .ಟಿ .ಓ ಬ್ರೋಕರ್ ಚಾಕರಿ !
‘ಮೇಟ್ರು’ಆಗಬೇಕಿದ್ದ ಸೀನನದು
ಗುಮಾಸ್ತನ ನೌಕರಿ !!
ಇನ್ನು ಗಾಯಿತ್ರಿಯ ಮಕ್ಕಳ ,
ತಂದೆಯಾಗಬೇಕಿದ್ದ ಶಂಕರ
ಸನ್ಯಾಸಿಯಾಗಿದ್ದಾನೆ ಅಂತ ಗಾಳಿಸುದ್ದಿ !!!
ನಾನು ಅಷ್ಟೆ.
ಏನೋ ಆಗಲು ಹೋಗಿ ಮತ್ತೆನೋ ಆಗಿದ್ದೇನೆ ..
ಜಿಜ್ಞಾಸೆಗೆ ಉತ್ತರ ಹುಡುಕಲು
ಮತ್ತೆ ಪದ್ಮಾಸನ ಹಾಕಿ ಕುಳಿತಿದ್ದೇನೆ .
‘ನಾನು ನಾನಾಗಬೇಕು..ನನ್ನಿಷ್ಟದಂತೆ ಬದುಕಬೇಕು'
ಅನ್ನೋದು ಶೋಷಿತನ ಕ್ರಾಂತಿಗೀತೆ
'ನೀನು ನಾನಾಗಬೇಕು.. ನಾನು.. ನೀನಾಗಬೇಕು'
ಎಂಬುದು ಪ್ರಣಯಿಯ ಉನ್ಮತ್ತ ಪ್ರಲಾಪ
“ಏನಾದರೂ ಆಗು ಮೊದಲು ಮಾನವನಾಗು’
ಎನ್ನುವುದು ದ್ವೈತ.. ಅದ್ವೈತಗಳ ಮೀರಿದ ಕವಿವಾಣಿ
ಪ್ರಶ್ನೆಯಷ್ಟು ಸರಳವೇ
ಉತ್ತರ ?
ಕನಸಿನಷ್ಟು ಸುಲಭವೇ
ಅದರ ಸಾಕ್ಷಾತ್ಕಾರ ?
ಪರಿವರ್ತನೆ ಜಗದ ನಿಯಮವಲ್ಲ
ಪರಿಸ್ಥಿತಿಯ ಹುನ್ನಾರ
ಬದುಕು ಉರಿದು ಬೂದಿಯಾಗಿ
ಅಸ್ತಿತ್ವ ಕಳೆದುಕೊಳ್ಳುವ ‘ಕರ್ಪೂರ ‘