ಸೋಮವಾರ, ಮಾರ್ಚ್ 5, 2012

ಕಾಣೆಯಾದವಳ ಸ್ವಗತ!

ಬೆಳಕಿನ ಮೋಹಕೆ ಬಿದ್ದು
ಉರಿದ ಕರ್ಪೂರ ನಾನು
ಕೊನೆಗೆ ದಕ್ಕಿದ್ದು
ಮುಕ್ತಿ ಎಂಬ ಹೆಸರಲ್ಲಿ
ಅಸ್ತಿತ್ವವಿರದ ಬೂದಿ
ತ್ಯಾಗಿಯೆಂಬ "ಪಟ್ಟ "


ಬೆಳಗುವ ಭರದಲ್ಲಿ
ಸುಳ್ಳೇ ಕಳೆದು ಕೊಂಡಿದ್ದೇನೆ
ಜವ್ವನ , ಉತ್ಸಾಹ , ತ್ರಾಣ
ಬೆಳಗಿಸಿಕೊಂಡ ದೇವರೂ
ಮರೆತು ಬಿಟ್ಟಿದ್ದಾನೆ
ನೆನಪು ,ಬಿಸುಪು , ಒನಪು

ಮುಖದ ಮೇಲೆ
ಕಾಲನ ನಯವಂಚನೆ
ಪ್ರಕಟಿಸೋ ,
ಸಾಲು ಸಾಲು ನೆರಿಗೆ
ಅದೇ ವಾರಿಗೆಯ ಮನಸು ಮಾತ್ರ
ತುಂಬು ಕನ್ನೆ !

ಹುಡುಕುತ್ತಿದೆ ಇನ್ನೂ
ಕಳೆದುಕೊಂಡ
ರೂಪ ,ಸ್ವರೂಪ
ಒಡೆದ ಕನ್ನಡಿಯಲ್ಲಿ,
ಧೂಳಿಡಿದ ,
ಹಳೆಯ ಫೋಟೋಗಳಲಿ

ಕಾಮೆಂಟ್‌ಗಳಿಲ್ಲ: