ಹೇಳು ಏನು ಮಾಡಬೇಕು
ನೀನು ಒಲಿಯಲು
ಹೇಗೆ ಹಾಡಿ ಹೊಗಳಬೇಕು
ಕೋಪ ಕರಗಲು
ಯಾವ ಸುಳ್ಳು ಹೇಳಬೇಕು
ನೀನು ಮೆಚ್ಚಲು !
ಚಂದ್ರನಂತೆ ನಿನ್ನ ಮೋರೆ
ನಿನ್ನ ಬಿಟ್ಟರಿಲ್ಲ ನೀರೇ
ಎಂದು ಸಾರಿ ಹೇಳಲೇ,
ಮನಸ ಕದಿವ ಮಗುವ ನಗುವ
ಮೈಯ ಮರೆಸೋ ಅದರ ಸಿಹಿಯ
ಹೇಗೆ ತಾನೇ ಜರಿವುದು!
ಕನಸಿನಲ್ಲೂ ನೀನೆ ಬರುವೆ
ನಗುವಿನಲ್ಲೇ ನಶೆಯ ತರುವೆ
ಎಂದು ಸುಳ್ಳು ಹೇಳಲೇ,
ನಿದಿರೆ ಕದಿವ ಸಿನಿಮಾ ತಾರೆ
ಲೋಕ ಮರೆಸೋ ಮದ್ಯಮದಿರೆ
ಹೇಗೆ ತಾನೇ ಮರೆವುದು!
ನಿನ್ನ ಸನಿಹ ಅನ್ನ ನೀರು
ನಿನ್ನ ಮಡಿಲೆ ನಂಗೆ ಸೂರು
ಎಂದು ಕೂಗಿ ಹಾಡಲೇ,
ಹೊಟ್ಟೆ ಹಸಿವ ತಡೆವುದಿಲ್ಲ
ಬಯಲ ಬದುಕು ಸಾದ್ಯವಿಲ್ಲ
ಎಂಬ ಸತ್ಯ ತಡೆವುದು!
ನಿನ್ನ ಹೊರತು ಜಗವೇ ಇಲ್ಲ
ನಿನ್ನ ಮರೆತು ಬದುಕೇ ಇಲ್ಲ
ಎಂದು ನಾನು ನುಡಿಯಲೇ,
ಜನುಮ ಕೊಟ್ಟ ಜನನಿ ಮಮತೆ
ಮುಗಿಯದಂತ ಪ್ರೀತಿ ಒರತೆ
ಕಣ್ಣ ಮುಂದೆ ಬರುವುದು!
ಇಷ್ಟು ಮಾತ್ರ ಹೇಳಬಲ್ಲೆ
ಬೊಗಳೆ ಮಾತ ನಾನು ಒಲ್ಲೆ
ಎಷ್ಟೇ ಕಷ್ಟ ಅಗಲಿ,
ಹಳೆಯ ಹುಡುಗಿ ಮರೆಯುವೆ
ಅವಳ ನೆನಪು ಕಾಡಿದಾಗ
ನಿನ್ನ ತಬ್ಬಿ ಮಲಗುವೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ