ಸೋಮವಾರ, ಸೆಪ್ಟೆಂಬರ್ 6, 2010

ಪುನಾರಾವರ್ತನೆ

ಪುನಾರಾವರ್ತನೆ

ಹರೆಯದ ತೇರಿಗೆ ಪುಳಕದ ಜೋರು ಜಾತ್ರೆ
ಬೆರಗಿನ ಕಂಗಳಲಿ ಕನಸಿನ ಅಕ್ಷಯ ಪಾತ್ರೆ
ಮೈಗೆ ಹೆಣ್ತನದ ಧಾವಂತ !
ಮನಕೆ ಕಾಡುವ ಏಕಾಂತ !!

ನಿಲುವುಗನ್ನಡಿ ಮುಂದೆ ತಾಸು ಗಟ್ಟಲೆ ನಿಂತು,
ಹತ್ತು ಬಾರಿ ಹುಬ್ಬು ತೀಡಿ
ಹನ್ನೊಂದು ಬಾರಿ ಸೆರಗ ನೀವಿ,
ಹೆರಳ ಸಡಿಲ ಬಿಟ್ಟು ಮುಡಿಗೆ ಮೊಳ ಮಲ್ಲಿಗೆಯಿಟ್ಟು,
ಪುಟ್ಟ ಹೊಕ್ಕಳ ಕಾಣಲು ಅಸ್ಪಷ್ಟ ಬಿಟ್ಟು
ನೆರಿಗೆ ಒದೆಯುತ್ತ ನೀರಿಗೆಂದು ಹೊರಟರೆ
ಬಳುಕುವ ನಡು ಕೀಲುಕುದುರೆ
ಜಾರುವ ಜೀವ ಜಿಗಿಯೋ ಚಿಗರೆ
ತಬ್ಬಲಿ ತೋಳಿಗೆ ತಬ್ಬುಗೆಯ ತವಕ !
ಅಮ್ಮನಿಗೆ ಸಂಶಯ ಮಿಳಿತ ಆತಂಕ !!

ಆಗ ನಾನು ಹುಡುಗಿಯಾಗಿದ್ದೆ. ಈಗ ಎಲ್ಲವು ಇತಿಹಾಸ
ಮಾಸಲು ಭಿತ್ತಿ ಚಿತ್ರ .
ಅಕ್ಕಿಯಂತೆ ಅಗಳು ,ನೂಲಿನಂತೆ ಸೀರೆ !
ಮಗಳದು ಬಹುತೇಕ ನನ್ನದೇ ವರ್ತನೆಯ ಪುನಾರಾವರ್ತನೆ .
ಸಡಗರಗಳ ಸರದಿ ಅವಳದು !
ತಲ್ಲಣಿಸುವ ಸರದಿ ನನ್ನದು !!

1 ಕಾಮೆಂಟ್‌:

Chethan K ಹೇಳಿದರು...

ನಿಮ್ಮ ಕಾವ್ಯಸು೦ದರಿಯ ವಯ್ಯಾರ-ನಖರಾಗಳನ್ನು ನೋಡಿ
ಪುಳಕಗೊಳ್ಳುವ ಸರದಿ ನಮ್ಮದು!!
ಎರಡು-ಮಾತಿಲ್ಲ!! ತು೦ಬಾನೆ ಚೆನ್ನಾಗಿದೆ.